ನೆರ್ವಾಲ್, ಜೆರಾಲ್ಡ್ ಡೆ 
1808-1855, ಫ್ರೆಂಚ್ ಕವಿ. ಇದು ಕವಿಯ ಕಾವ್ಯನಾಮ ಮಾತ್ರ; ಈತನ ನಿಜನಾಮ ಜೆರಾರ್ಡ್ ಲಬ್ರೂನಿ. ತಂದೆ ವೈದ್ಯ. ನೆಪೋಲಿಯನ್ನನ ದಂಡಿನೊಡನೆ ಸಂಚರಿಸುತ್ತಿದ್ದ. ನೆರ್ವಾಲ್ ಪ್ಯಾರಿಸಿನ ಉತ್ತರ ಭಾಗದ ಹಳ್ಳಿಗಾಡು ಪ್ರದೇಶದಲ್ಲಿ ಸಮೀಪ ಬಂಧುಗಳೊಂದಿಗೆ ವಾಸವಿದ್ದು ವಿದ್ಯಾಭ್ಯಾಸ ನಡೆಸಿದ. ಚಿಕ್ಕಪ್ಪನ ಮನೆಯಲ್ಲಿದ್ದ ಅಮೂಲ್ಯ ಗ್ರಂಥಗಳನ್ನು ಓದಿ ಹೆಚ್ಚಿನ ಜ್ಞಾನ ಸಂಪಾದಿಸಿಕೊಂಡ. ಅನಂತರ ಪ್ಯಾರಿಸಿನ ಚಾರ್ಲ್‍ವನ್ ಶಾಲೆಯಲ್ಲಿ ಓದು ಮುಂದುವರಿಸಿದ. ಆಗ ನಗರದಲ್ಲಿ ತರುಣ ಫ್ರಾನ್ಸು ಎಂಬೊಂದು ಕಿರಿಯ ರೊಮ್ಯಾಂಟಿಕ್ ಕಲಾವಿದರ ಗುಂಪು ಗಣರಾಜ್ಯವಾದಿಯಗಿ, ವೇಷ ವಸನದಲ್ಲಿ ಸ್ವೇಚ್ಛಾವರ್ತನೆ ನಡೆಸುತ್ತ ಗಲಭೆ ಎಬ್ಬಿಸುತ್ತಿತ್ತು. ಗೌತಿಯರ್, ಬೋರೆಲ್, ಓನೆಡ್ಡಿ ಮುಂತಾದವರು ಒಂದು ರಾತ್ರಿ ಮದ್ಯಪಾನದ ಅಮಲಿನಲ್ಲಿ ಬೀದಿ ಬೀದಿ ಸುತ್ತುತ್ತ ತಾವು ಬೂಸಿಂಗೊಗಳು ಎಂದು ಕಿರುಚುತ್ತ ಶಾಂತಿಭಂಗ ಉಂಟುಮಾಡಿ ಪೋಲೀಸರ ಬಂಧನಕ್ಕೆ ಗುರಿಯಾದರು. ಬೊಸಿಂಗೊ ಎಂದರೆ ನಾವಿಕರ ಅಗಲವಾದ ಅಂಚಿನ ತಲೆಟೊಪ್ಪಿಗೆ; ಅದೇ ಕಿರಿಯ ರೊಮ್ಯಾಂಟಿಕರ ಮಂಡೆಯ ಮೇಲೆ ವಿರಾಜಿಸುತ್ತಿದ್ದ ಅಲಂಕಾರ; ಮುಂದೆ ಅವರಿಗೆ ಬೂಸಿಂಗೊ ಎಂದೇ ಅಣಕದ ಅಂಕಿತವಾಯಿತು. ಜಾಯಮಾನ ಸಾಮ್ಯತೆಯಿಂದ ನೆರ್ವಾಲ್ ಈ ತಂಡದವರ ಗೆಳೆಯನಾದ; ಸಮಾಜದ ನಯನೀತಿ ಎದುರು ದಂಗೆಯೆದ್ದು ಸಭ್ಯರಿಗೆ ತೊಂದರೆ ಕೊಡುವ ಕಾರ್ಯ ಈತನಿಗೂ ರುಚಿಸಿತು.

  	ಈತನಲ್ಲಿ ಲೇಖನಶಕ್ತಿ ಅಸಾಧಾರಣವಾಗಿತ್ತು. ಇಪ್ಪತ್ತು ವರ್ಷದವನಾಗಿದ್ದಾಗಲೇ ಈತ ಗಯಟೆಯ ಫೌಸ್ಟ್ ನಾಟಕವನ್ನು ಫ್ರೆಂಚಿಗೆ ಗಯಟೆಯ ಮೆಚ್ಚುವಂತೆ ಭಾಷಾಂತರ ಮಾಡಿದ. ಸುಮಾರು 1831-1838ರ ಅವಧಿಯಲ್ಲಿ ಜೆನ್ನಿ ಕೋಲನ್ ಎಂಬ ನಟಿಗೂ ಈತನಿಗೂ ಏರ್ಪಟ್ಟ ಪ್ರೇಮ ಈತನ ಜೀವನದ ಮೇಲೆ ತುಂಬ ಪ್ರಭಾವ ಬೀರಿತು. ಈ ಪ್ರೇಮ ಈತನಿಗೆ ನೆಮ್ಮದಿಯಾಗಲಿ ಉಲ್ಲಾಸವಾಗಲಿ ತರಲಿಲ್ಲ. ಸದಾ ಅಲೆದಾಡುವ ಸ್ವಭಾವದವನಾದ ಈತ ಎಲ್ಲೂ ಖಾಯಂ ಆಗಿ ನೆಲೆಸದೆ, ಮಿತ್ರರ ಅನಿಶ್ಚಿತ ಆತಿಥ್ಯದಿಂದ ಹೊಟ್ಟೆಹೊರೆದುಕೊಳ್ಳುತ್ತ ಸಿಕ್ಕಿದೆಡೆ ಮಲಗುತ್ತ ದಿವಸಗಳನ್ನು ದೂಡಿದ. ಪರಿಣಾಮವಾಗಿ 1841ರಲ್ಲಿ ಬುದ್ಧಿವಿಕಲ್ಪಕ್ಕೆ ಒಳಗಾದ. ಖಾಸಗಿ ಚಿಕಿತ್ಸಾಲಯದಲ್ಲಿ ಕೆಲವು ತಿಂಗಳು ತಂಗಿದ್ದು ಸಾಕಷ್ಟು ಮಾನಸಿಕ ಆರೋಗ್ಯವನ್ನು ಸಂಪಾದಿಸಿಕೊಂಡ. ಆದರೂ ಮತ್ತೆ ಹುಚ್ಚು ಮರುಕಳಿಸುವ ಭೀತಿ ಕಾಡುತ್ತಲೇ ಇತ್ತು. ಆಂತರ್ಯ ಸ್ವಸ್ಥವಾಗಿರುತ್ತಿದ್ದ ಸಮಯದಲ್ಲಿ ಈತ ಬರೆದ `ಪೂರ್ವದಿಕ್ಕಿಗೆ ಪಯಣ', `ಲೊರೆಲಿ, `ಜರ್ಮನಿಯ ಸಂಸ್ಮರಣ' ಎಂಬ ಪ್ರಬಂಧಗಳು ಜನಪ್ರಿಯವಾದವು. ಸಾಹಿತ್ಯ ಪತ್ರಿಕೆಗಳಿಂದ ಮತ್ತೆ ಮತ್ತೆ ಲೇಖನಕ್ಕಾಗಿ ಕರೆ ಬರತೊಡಗಿತು. ಭಾವಗೀತೆ, ಗದ್ಯ, ಪದ್ಯ, ವಿಡಂಬನ, ಸಣ್ಣ ಕಥೆ, ಪ್ರಬಂಧ, ನಾಟಕ ವಿಮರ್ಶೆ ಮೊದಲಾದವನ್ನು ರಸವತ್ತಾಗಿಯೂ ಅಚ್ಚರಿ ಮೂಡುವಂತೆಯೂ ಬರೆದು ಪ್ರಕಟಿಸಿದ. ಅವುಗಳಿಂದ ಸಾಕಷ್ಟು ವರಮಾನ ಬರುತ್ತಿದ್ದರೂ ಈತನ ಅಕ್ರಮ ಬದುಕು ಸದಾ ಬಡತನದಲ್ಲಿ ಈತನನ್ನು ಮುಳುಗಿಸಿತ್ತು. ಹುಚ್ಚನಾಗುವ ಭಯ ಇದ್ದೇ ಇತ್ತು. ಆಗಾಗ ಹುಚ್ಚು ಕೆರಳುತ್ತಿದ್ದುದೂ ಉಂಟು. ಒಂದು ಮುಂಜಾನೆ ಹಳೆಯ ಪ್ಯಾರಿಸ್ಸಿನ ಕೇರಿಯೊಂದರಲ್ಲಿ ಈತನ ಮೃತ ಶರೀರ ಕಟಕಟೆಗೆ ಒರಗಿಕೊಂಡಿತ್ತು. ಬಾಳಬೇಗೆಯಿಂದ ರೋಸಿ ತಾನೇ ಆತ್ಮಹತ್ಯೆ ಮಾಡಿಕೊಂಡನೋ ಈತನ ಬಳಿ ಇದ್ದ ಪುಡಿಕಾಸಿಗೋಸ್ಕರ ಯಾರಾದರೂ ಕತ್ತು ಹಿಸುಕಿದರೊ ತಿಳಿಯದು.

  	ಪದ್ಯಕಾವ್ಯದಲ್ಲಿ ಈತ ಸಂಯುಕ್ತ ಸಂಸ್ಥಾನದ ಎಡ್ಗರ್ ಆಲನ್ ಫೋನನ್ನು ಹೋಲುತ್ತಾನೆಂದು ಅನೇಕ ವಿಮರ್ಶಕರ ಅಭಿಪ್ರಾಯ. ಇಬ್ಬರ ಭಾಷೆಯೂ ಛಂದೋಬಂಧವೂ ಓಟ ಧಾಟಿ ಇಂಪು ರಮಣೀಯತೆಗಳಲ್ಲಿ ಉತ್ಕøಷ್ಟ ಕವಿತೆಯನ್ನೂ ಮೀರಿಸಿ ಮುಂದೆ ಹೋಗಿ ತಾಳಲಯಬದ್ಧ ಸಂಗೀತದ ನೆನಪನ್ನು ತಂದುಕೊಡಬಲ್ಲವು. ಬೇರೆಬೇರೆಯಾದ ಎರಡು ಲಲಿತಕಲೆಗಳ ಸಮ್ಮಿಶ್ರ ಲಾವಣ್ಯ ಇವುಗಳಲ್ಲಿ ಕುದುರಿ ಬಂದಿದೆ. ಹಾಗಿದ್ದರೂ ಪೋ ಹಾಗೂ ನೆರ್ವಾಲ್ ಸರಿಸಮರಲ್ಲ. ಸೌಜನ್ಯಪೂರಿತ ಮನೋಧರ್ಮದಲ್ಲೂ ಸಾಹಿತ್ಯಪ್ರಜ್ಞೆ ಮತ್ತು ಗ್ರಂಥ ಜ್ಞಾನದಲ್ಲೂ ನೆರ್ವಾಲ್ ಹೆಚ್ಚಿನವ. ಪೋನಲ್ಲಿ ಕಾಣಬರುವ ಕೃತಕತೆ ಪ್ರಯಾಸಗಳ ಛಾಯೆ ಈತನಲ್ಲಿ ಇಲ್ಲ. ಈತನ ಪದ್ಯಕಾವ್ಯ ಮೂರು ಬಗೆಯದು. ಕೊಂಚ ಆಧುನಿಕತ್ವ ಕೂಡಿದ ಜನಪದ ಗೀತ, ಭಾವಪೂರಿತ ಸಾನೆಟ್ಟು, ಮಿಶ್ರಕವನ.

  	ಗದ್ಯಲೇಖನ ನೆರ್ವಾಲನ ಪುಷ್ಟ ಕೊಡುಗೆ, ಇಷ್ಟ ಮಾರ್ಗ. ವಿಸ್ಮಯ ಮಾದರಿಯ ಲಯಬದ್ಧ ವಾಕ್ಯಗಳಿಂದ ತುಂಬಿದೆಯಾಗಿ ಅದು ಹಿರಿಯರ್ಥದಲ್ಲಿ ಗದ್ಯಕಾವ್ಯ ಎಂದಿದ್ದಾರೆ. ಹಾಗೂ ಅದೆಲ್ಲ ನೇರವೂ ಸರಾಗವೂ ಪ್ರಾಮಾಣಿಕವೂ ಆದ ಬರೆವಣಿಗೆ. ನೆರ್ವಾಲನ ಕೃತಿಗಳೆಲ್ಲ ಅವನ ದೃಷ್ಟಿಯಂತೆ ಒಂದೇ ರೀತಿಯವೆಂದೂ ತೋರಿ ಬಂದರೂ ಇತರರ ದೃಷ್ಟಿಗೆ ಅವು ಎರಡು ರೀತಿಯಾಗಿ ಗೋಚರಿಸುತ್ತವೆ. ನಿಸರ್ಗ ವರ್ಣನೆ, ಸರಳ ಸಾಮಾನ್ಯ ವ್ಯಕ್ತಿಚಿತ್ರಣ. ಕವಿಯ ಬಾಲ್ಯ ಯೌವನಗಳ ಸವಿನೆನಪಿನ ವರದಿ-ಇವುಗಳನ್ನು ಈತ ಮುದ್ದಾಗಿಯೂ ಅಂದಚಂದವಾಗಿಯೂ ರೂಪಿಸಿದ್ದಾನೆ. ಆತ್ಮಾನುಭವದ ಅಡಿಪಾಯದ ಮೇಲೆ ಕಟ್ಟಿದ ಸಿಲ್ವೀ ಎಂಬ ಸಣ್ಣ ಕಥೆ ಈತನ ಮೇರುಕೃತಿ. ರೊಮ್ಯಾಂಟಿಕ್ ಪಂಥದ ಸೌಮ್ಯ ಮುಖ ಒಂದಾದರೆ ಇನ್ನೊಂದು ಮುಖ ಘೋರ ಮತ್ತು ವಿಕಾರ. ನೆತ್ತರು ದೆವ್ವ ಮುಂತಾದ ಕಲ್ಪನೆಗಳು, ಗಾಬರಿಗೊಳಿಸುವ ಘಟನಾವಳಿಗಳು ಅಕಟವಿಕಟ ವ್ಯಕ್ತಿಗಳೂ ಎಲ್ಲವೂ ಒಟ್ಟುಗೂಡಿ ಕಥೆಯನ್ನು ಮೈನವಿರೇಳಿಸಿ ಓದುಗರ ರಕ್ತವನ್ನು ಹೆಪ್ಪುಗಟ್ಟಿಸುತ್ತವೆ. ಈಗ ತಾನೆ ಶವವಾದ ದೇಹದಿಂದ ಕತ್ತರಿಸಿ ತೆಗೆದ ಹಸ್ತದಿಂದ ಉತ್ಪತ್ತಿಯಾಗುವ ಭೀಕರ ವಿದ್ಯಮಾನಗಳ ಉಪಾಖ್ಯಾನವಾದ `ಮಾಯದ ಹಸ್ತ ಎಂಬುದು ಒಳ್ಳೆಯ ನಿದರ್ಶನ. ಅಂಥ ಲೇಖನಗಳ ಕಂತೆಗೆ ಸೇರಿದ್ದರೂ `ಆರೀಲಿಯಾ ಎಂಬುದು ಅತ್ಯಂತ ಕುತೂಹಲಜನಕವಾಗಿದೆ. ಇದರಲ್ಲಿ ಕವಿ ನಾನಾ ಸ್ವಪ್ನ ದರ್ಶನಗಳನ್ನೂ ತನ್ನ ಹುಚ್ಚು ಹಂತ ಹಂತವಾಗಿ ಬೆಳೆದ ವೃತ್ತಾಂತವನ್ನೂ ಸ್ಫುಟವಾಗಿ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾನೆ. ಪ್ರಬಂಧದ ವಿಷಯ ಮತಿವಿಭ್ರಮ ಆಥವಾ ಸನ್ನಿಯ ಅದುರಾಟ ಕೂಗಾಟ. ಶೈಲಿಯಾದರೋ ಬಹಳ ತಿಳಿಯಾದದ್ದು. ಈ ವೈಚಿತ್ರ್ಯವನ್ನು ಗೌತಿಯರ್ `ಬುದ್ಧಿ ವಿಕಲ್ಪ ತನ್ನ ನೆನಪುಗಳನ್ನು ಒರೆಯಿತು, ವಿವೇಕ ಬರೆಯಿತು. ನಿದ್ದೆಯಲ್ಲಿ ಕಾಣ್ಕೆ, ಸುಪ್ತಚೇತನದ ಅರಿಮೆ, ಅತೀಂದ್ರಿಯ ವ್ಯಾಪಾರ-ಇತ್ಯಾದಿ ಗೂಢ ವಿಚಾರ ಯೋಚನಾಪರರನ್ನು ಚೋದಿಸುತ್ತಿರುವ ಈ ಕಾಲದಲ್ಲಿ ನೆರ್ವಾಲ್ ಅತಿಶಯ ಮುನ್ನೋಟದ ಪ್ರತಿಭಾಶಾಲಿಯಂತೆ ಕಂಡುಬಂದರೆ ಆಶ್ಚರ್ಯವಿಲ್ಲ ಎಂದಿದ್ದಾನೆ.								(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ